ತಾಷ್ಕೆಂಟ್ ಘೋಷಣೆ -
ಭಾರತದ ಪ್ರಧಾನ ಮಂತ್ರಿಯಾಗಿದ್ದ ಲಾಲ್ ಬಹಾದ್ದೂರ್ ಶಾಸ್ತ್ರೀ ಮತ್ತು ಪಾಕಿಸ್ತಾನನ ಅಧ್ಯಕ್ಷರಾಗಿದ್ದ ಅಯೂಬ್ ಖಾನ್ ಇವರು 1966ರ ಜನವರಿ 10 ರಂದು ಸೋವಿಯೆತ್ ಒಕ್ಕೂಟದ ಉಜ್‍ಬೆಕ್ ಗಣರಾಜ್ಯದ ರಾಜಧಾನಿ ತಾಷ್ಕೆಂಟಿನಲ್ಲಿ ಸಹಿ ಹಾಕಿ ಹೊರಡಿಸಲಾದ ಘೋಷಣೆ. 1965ರ ಭಾರತ-ಪಾಕಿಸ್ತಾನ ಯುದ್ಧದ ಅನಂತರ ಇವೆರಡೂ ದೇಶಗಳ ನಡುವೆ ಶಾಂತಿಯನ್ನು ಕುದುರಿಸುವ ಉದ್ದೇಶದಿಂದ ಸೋವಿಯೆತ್ ಒಕ್ಕೂಟದ ಪ್ರಧಾನ ಮಂತ್ರಿ ಕೊಸಿಗಿನರು ತಾಷ್ಕೆಂಟಿನಲ್ಲಿ ಏರ್ಪಡಿಸಿದ್ದ ಮಾತುಕತೆಯ ಪರಿಣಾಮವಿದು.

ಸೋವಿಯೆತ್ ಸರ್ಕಾರದ ಆಹ್ವಾನದ ಮೇರೆಗೆ ತಾಷ್ಕೆಂಟಿನಲ್ಲಿ 1966ರ ಜನವರಿ 4ರಂದು ಲಾಲ್ ಬಹಾದ್ದೂರ್ ಶಾಸ್ತ್ರೀ ಮತ್ತು ಅಯೂಬ್‍ಖಾನರು ಮಾತುಕತೆ ಪ್ರಾರಂಭಿಸಿದರು. ಈ ಮಾತುಕತೆ ನಡೆದ ಆರು ದಿನಗಳ ಕಾಲ ಕೊಸಿಗಿನರು ತಾಷ್ಕೆಂಟಿನಲ್ಲೇ ಇದ್ದರು. ಮಾತುಕತೆಯಲ್ಲಿ ಬಿಕ್ಕಟ್ಟು ಉಂಟಾದಾಗ ಅದನ್ನು ಬಗೆಹರಿಸಲು ಅವರು ಮಹತ್ವ ಪಾತ್ರ ವಹಿಸಿದರು, ಶಾಸ್ತ್ರಿ ಮತ್ತು ಅಯೂಬ್ ಖಾನರ ಕೋರಿಕೆಯಂತೆ ಕೊಸಿಗಿನರು ನಡೆವಳಿಗಳನ್ನು ಪ್ರಾರಂಭಿಸುವುದರ ಜೊತೆಗೆ ತಾಷ್ಕೆಂಟ್ ಘೋಷಣೆಯ ಮುಖ್ಯ ಸಾಕ್ಷಿಯೂ ಆಗಿದ್ದರು.

ಭಾರತ ಮತ್ತು ಪಾಕಿಸ್ತಾನಗಳ ನಡುವೆ ಆದರ್ಶಪ್ರಾಯವಾದ ಶಾಂತಿಯುತ ಸಂಬಂಧಗಳನ್ನು ಸ್ಥಾಪಿಸಲು, ತಮ್ಮ ಜನತೆಯ ನಡುವೆ ಸಾಮರಸ್ಯ ಮತ್ತು ಸ್ನೇಹ ಸಂಬಂಧಗಳನ್ನು ಉತ್ತಮಪಡಿಸಲು, ಎರಡೂ ದೇಶಗಳ 60,00,00,000 ಜನತೆಯ ಹಿತಕ್ಕಾಗಿ ಮಹತ್ತ್ವಪೂರ್ಣವಾದ ಗುರಿಗಳನ್ನು ಸಾಧಿಸಲು, ವಿಶ್ವಸಂಸ್ಥೆಯ ಶಾಸನಕ್ಕೆ ಅನುಸಾರವಾಗಿ ಎರಡೂ ದೇಶಗಳ ನಡುವೆ ಒಳ್ಳೆಯ ನೆರೆಹೊರೆ ಸಂಬಂಧಗಳನ್ನು ರೂಪಿಸಲು, ಈ ಒಪ್ಪಂದವನ್ನು ಕಾರ್ಯಗತಗೊಳಿಸುವ ಕಾರ್ಯದಲ್ಲಿ ಹಿಂದೆ ಗೆಯದೆ ಪರಸ್ಪರರ ನಡುವಣ ವಿವಾದಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಲು, ಶಾಂತಿಯ ದೃಷ್ಟಿಯಿಂದ ಭಾರತ - ಪಾಕಿಸ್ತಾನ ಉಪಖಂಡದಲ್ಲಿ, ಅದರಲ್ಲೂ ಮುಖ್ಯವಾಗಿ ತಮ್ಮ ಜನತೆಯ ಹಿತದೃಷ್ಟಿಯಿಂದ ಮತ್ತೆ ಪರಸ್ಪರರ ನಡುವೆ ಬಿಕ್ಕಟ್ಟು ತಲೆದೋರದಂತೆ ನಡೆದುಕೊಳ್ಳಲು ; 1965ರ ಆಗಸ್ಟ್ 5ರಂದು ಇದ್ದ ಮೊದಲಿನ ಸ್ಥಳಗಳಿಗೆ ತಮ್ಮ ತಮ್ಮ ಸೈನ್ಯವನ್ನು 1966ರ ಫೆಬ್ರುವರಿ 28ಕ್ಕಿಂತ ಮುಂಚಿತವಾಗಿ ಹಿಂತೆಗೆದುಕೊಳ್ಳಲು, ಯುದ್ಧ ನಿಲುಗಡೆ ರೇಖೆಗೆ ಅನುಸಾರವಾಗಿ ಯುದ್ಧ ನಿಲುಗಡೆ ನಿಯಮಗಳನ್ನು ಅನುಸರಿಸಲು; ಪರಸ್ಪರ ದೇಶಗಳ ಆಂತರಿಕ ವಿಷಯಗಳಲ್ಲಿ ಪ್ರವೇಶಿಸಬಾರದೆಂಬ ತತ್ತ್ವವನ್ನು ಆಧಾರವಾಗಿಟ್ಟುಕೊಳ್ಳಲು; ಪರಸ್ಪರ ದೇಶಗಳ ವಿರುದ್ಧ ಮಾಡುವ ಅಪಪ್ರಚಾರಗಳನ್ನು ಬೆಂಬಲಿಸದೆ, ಸ್ನೇಹ ಪೂರ್ವಕ ಸಂಬಂಧಗಳನ್ನು ವೃದ್ಧಿ ಗೊಳಿಸುವ ಪ್ರಚಾರಗಳಿಗೆ ಉತ್ತೇಜನ ನೀಡಲು; ಭಾರತದ ರಾಜತಾಂತ್ರಿಕರು ಪಾಕಿಸ್ತಾನದ ರಾಜತಾಂತ್ರಿಕರು ಭಾರತಕ್ಕೂ, ತಮ್ಮ ತಮ್ಮ ಸ್ಥಾನಗಳಿಗೆ, ಹಿಂದಿರುಗುವುದಲ್ಲದೆ ಎರಡೂ ದೇಶಗಳ ನಡುವೆ ರಾಯಭಾರ ವ್ಯವಹಾರ ಮುಂದುವರಿಸಲು, ರಾಯಭಾರ ವ್ಯವಹಾರದಲ್ಲಿ 1961 ರ ವಿಯೆನ್ನ ಒಪ್ಪಂದವನ್ನು ಪಾಲಿಸಿಕೊಂಡು ಬರಲು; ಆರ್ಥಿಕ ವಾಣಿಜ್ಯ ಸಂಬಂಧಗಳು, ಸಂಪರ್ಕಗಳು, ಸಾಂಸ್ಕøತಿಕ ವಿನಿಮಯ ಮುಂತಾದವನ್ನು ಪೂರ್ವಸ್ಥಿತಿಗೆ ತರಲು, ಪ್ರಕೃತದಲ್ಲಿ ಇರುವ ಕರಾರುಗಳನ್ನು ಕಾರ್ಯಗತಗೊಳಿಸಲು ಅಗತ್ಯ ಕ್ರಮಗಳನ್ನು ಪರ್ಯಾಲೋಚಿಸಲು ; ಯುದ್ಧ ಕೈದಿಗಳನ್ನು ಅವರವರ ತಾಯ್ನಾಡಿಗೆ ಹಿಂದಿರುಗಿಸುವಂತೆ ತಂತಮ್ಮ ಕಡೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ತಿಳಿವಳಿಕೆ ನೀಡಲು; ನಿರಾಶ್ರಿತರು, ಕಾನೂನು ಬಾಹಿರ ವಲಸೆಗಾರರನ್ನು ಹೊರಕ್ಕೆ ಕಳುಹಿಸುವ ವಿಷಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕುರಿತ ಚರ್ಚೆಯನ್ನು ಮುಂದುವರಿಸಲು, ಜನರು ದೇಶ ಬಿಟ್ಟು ವಲಸೆ ಹೋಗುವುದನ್ನು ತಪ್ಪಿಸಲು ಅಗತ್ಯವಾದ ಸ್ಥಿತಿಗತಿಗಳನ್ನು ರೂಪಿಸಲು, ಯುದ್ಧದಲ್ಲಿ ವಶಪಡಿಸಿಕೊಳ್ಳಲಾದ ಆಸ್ತಿಪಾಸ್ತಿಯನ್ನು ಸಂಬಂಧಿಸಿದವರಿಗೆ ಹಿಂದಿರುಗಿಸುವುದನ್ನು ಚರ್ಚಿಸಲು; ಮುಂದೆ ತೆಗೆದುಕೊಳ್ಳಬೇಕಾದ ಅಗತ್ಯಕ್ರಮಗಳನ್ನು ಕುರಿತು ತಂತಮ್ಮ ಸರ್ಕಾರಗಳಿಗೆ ವರದಿಮಾಡಲು ಭಾರತ-ಪಾಕಿಸ್ತಾನ ಸಂಯುಕ್ತ ಮಂಡಳಿಯನ್ನು ರೂಪಿಸಬೇಕಾದ ಅಗತ್ಯವನ್ನು ಮನಗಂಡು ಎರಡೂ ದೇಶಗಳಿಗೆ ನೇರವಾಗಿ ಸಂಬಂಧಿಸಿದ ವಿಷಯಗಳನ್ನು ಕುರಿತು ಉನ್ನತ ಹಾಗೂ ಇನ್ನಿತರ ಹಂತಗಳಲ್ಲಿ ಚರ್ಚೆ ಮುಂದುವರಿಸಲು ಒಪ್ಪಿ ಈ ಘೋಷಣೆಗೆ ಎರಡೂ ದೇಶಗಳ ಮುಖ್ಯಸ್ಥರು ಸಹಿ ಹಾಕಿದರು.

ಸಹಿ ಹಾಕುವ ಸಮಾರಂಭದ ಕೊನೆಯಲ್ಲಿ ಸಂಕ್ಷಿಪ್ತ ಭಾಷಣ ಮಾಡಿ ಕೊಸಿಗಿನರು ಭಾರತದ ಪ್ರಧಾನಿ ಮತ್ತು ಪಾಕಿಸ್ತಾನದ ಆಧ್ಯಕ್ಷರನ್ನು ಅಭಿನಂದಿಸುತ್ತ, ತಾಷ್ಕೆಂಟ್ ಘೋಷಣೆ ಭಾರತ ಮತ್ತು ಪಾಕಿಸ್ತಾನಗಳ ಸ್ನೇಹದ ನಿರಂತರ ಕುರುಹಾಗಿ ಇರಲಿ ಎಂದು ಹಾರೈಸಿದರು. ಭಾರತ ಮತ್ತು ಪಾಕಿಸ್ತಾನಗಳ ಬಾಂಧವ್ಯದಲ್ಲಿ ಈ ಘೋಷಣೆ ಒಂದು ಹೆಗ್ಗುರುತಾಗಿದೆಯಾದರೂ ಇದರ ಆಶಯಗಳೆಲ್ಲ ಅನಂತರ ಕಾರ್ಯಗತವಾಗಲಿಲ್ಲ. ಈ ಘೋಷಣೆಗೆ ಸಹಿ ಹಾಕಿದ ಕೆಲವು ಗಂಟೆಗಳೊಳಗೆ ಲಾಲ್ ಬಹಾದ್ದೂರ್ ಶಾಸ್ತ್ರೀಯವರು ಹೃದಯಾಘಾತದಿಂದ ಮರಣ ಹೊಂದಿದರು.							     (ಎಂ.ಎನ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ